ಕರ್ನಾಟಕ ಗಮಕ ಕಲಾ ಪರಿಷತ್ತಿನ ಸಾರ್ಥಕ ೩೦ ವರ್ಷಗಳು

ಕನ್ನಡ ನಾಡಿನಲ್ಲಿ ಗಮಕ ಕಲೆಯು ಕಾವ್ಯ ಸಾಹಿತ್ಯ, ಸಂಗೀತಗಳನ್ನು ಮೈಗೂಡಿಸಿಕೊಂಡು ಹಾಸು ಹೊಕ್ಕಾಗಿ ಬೆಳೆದು ಬಂದಿದೆ. ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕಗಳಲ್ಲಿ ಪ್ರಾದೇಶಿಕವಾಗಿ ತುಸು ಭಿನ್ನತೆಯಿಂದ ಕೂಡಿದ್ದರೂ, ಒಟ್ಟಂದವಾಗಿ ಗಮಕ ಕಲೆಯು ನಾಡಿನಾದ್ಯಂತ ಹರಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪ್ರಾಚೀನತೆಯ ದೃಷ್ಟಿಯಿಂದ ವೇದ ಕಾಲೀನವೆಂದು ಹೇಳಬಹುದಾದರೂ, ಆದಿಕವಿ ವಾಲ್ಮೀಕಿಯೇ ಗಮಕ ಕಲೆಯ ಪ್ರಥಮ ಗುರುವೆಂದೂ ಅಯೋಧ್ಯಾರಾಮನ ಮಕ್ಕಳಾದ ಲವಕುಶರೇ ಪ್ರಥಮ ಗಮಕಿಗಳೆಂದೂ ಬಲ್ಲವರು ಹೇಳುತ್ತಾರೆ. ಅದು ಹೇಗೂ ಇರಲಿ; ಕಾವ್ಯದ ಹುಟ್ಟಿನೊಂದಿಗೆ ಕಾವ್ಯವಾಚನ ಪ್ರಕ್ರಿಯೆಯೂ ಪ್ರಾರಂಭವಾಯಿತೆನ್ನುವುದು ನಿರ್ವಿವಾದ.

ಸರಳವೂ, ಸುಸಂಸ್ಕೃತವೂ ಆದ ‘ಗಮಕ ಕಲೆ’ಯ ವಿಭಾಗವೊಂದು ಕನ್ನಡ ಸಾಹಿತ್ಯ ಪರಿಷತ್ತಿನ ಅವಿಭಾಜ್ಯ ಅಂಗವಾಗಿ ಆಧುನಿಕ ಕನ್ನಡ ನಾಡಿನಲ್ಲಿ ಬೆಳೆದು ಬಂತು. ಕನ್ನಡ ಸಾಹಿತ್ಯ ಪರಿಷತ್ತು ಗಮಕ ಕಲೆಗಾಗಿಯೇ ಪ್ರತ್ಯೇಕ ಪಠ್ಯಪುಸ್ತಕ, ಪರೀಕ್ಷಾ ಪದ್ಧತಿಗಳನ್ನು ಅಳವಡಿಸಿಕೊಂಡಿತ್ತು. ೧೯೮೦ರ ಸುಮಾರಿಗೆ ಕನ್ನಡ ಸಾಹಿತ್ಯ ಪರಿಷತ್ತು ಗಮಕ ಕಲಾ ಪ್ರಸಾರದ ಬಗ್ಗೆ ಆಸಕ್ತಿಯನ್ನು ಕುಂಠಿತಗೊಳಿಸಿತು. ಗಮಕ ಕಲೆಯ ಸಂರಕ್ಷಣೆ ಬೆಳವಣಿಗೆ, ನವೀಕರಣ, ಗಮಕ ಕಲಾವಿದರ ಹಿತರಕ್ಷಣೆಯೇ ಮೊದಲಾದ ಸರ್ವಾಂಗೀಣ ಬೆಳವಣಿಗೆಯು ಅಂದಿನ ದಿನಗಳಲ್ಲಿ ಅತ್ಯವಶ್ಯವಾಗಿತ್ತು. ಇದನ್ನು ಮನಗಂಡ ಸಮಾನ ಮನಸ್ಕ ಅನೇಕ ಹಿರಿಯರೂ, ಗಮಕ ಕಲಾಭಿಮಾನಿಗಳೂ, ಗಮಕಿಗಳೂ ಗಮಕ ಕಲೆಗೇ ಮೀಸಲಾದ ಒಂದು ಸಂಸ್ಥೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಚಿಂತಿಸಿದರು.

೧೯೮೧ರ ಮೇ ತಿಂಗಳಿನಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಆವರಣದಲ್ಲಿ ಗಮಕಿ ಶ್ರೀ ಎಂ. ರಾಘವೇಂದ್ರ ರಾಯರ ನೇತೃತ್ವದಲ್ಲಿ ಗಮಕ ಸ್ಪರ್ಧೆ, ವಾಚನ ಇತ್ಯಾದಿಗಳು ನಡೆದುವು. ಅದೇ ದಿನ ಅಪರಾಹ್ನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಅನೇಕ ಗಮಕಿಗಳು, ಗಮಕ ಕಲಾಭಿಮಾನಿಗಳು ಸೇರಿ ಒಂದು ಸಭೆ ನಡೆಸಿದರು. ಗಮಕಿ ಶ್ರೀ ಎಂ. ರಾಘವೇಂದ್ರರಾಯರು ಗಮಕ ಕಲೆಯ ಪ್ರಸಾರಕ್ಕಾಗಿಯೇ ಒಂದು ರಾಜ್ಯಮಟ್ಟದ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದರು.

ಇದರ ಫಲವಾಗಿ, ೧೯೮೨ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ನರಸಿಂಹರಾಜ ಕಾಲೋನಿಯ ಶ್ರೀರಾಮ ಮಂದಿರದಲ್ಲಿ ಗಮಕಿ ಶ್ರೀ ಎಂ. ರಾಘವೇಂದ್ರರಾಯರು ಮತ್ತು ಪ್ರೊ. ಎಂ.ವಿ. ಸೀತಾರಾಮಯ್ಯನವರ ಹಿರಿತನದಲ್ಲಿ ಒಂದು ಸಭೆಯು ಏರ್ಪಟ್ಟಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶ್ರೀ. ಜಿ. ನಾರಾಯಣ, ಡಾ|| ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮೊದಲಾದ ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡು ಗಮಕ ಕಲೆಗಾಗಿ ಚಿಂತನ-ಮಂಥನ ನಡೆಸಿದರು. ಕೊನೆಯಲ್ಲಿ ಶ್ರೀ. ಜಿ. ನಾರಾಯಣ ಅವರು ಅಧ್ಯಕ್ಷರಾಗುಳ್ಳ ಒಂದು ತಾತ್ಪೂರ್ತಿಕ ಸಮಿತಿಯನ್ನು ರಚಿಸಿದರು. ಈ ಸಮಿತಿಯು ನೂತನ ಸಂಸ್ಥೆಯ ಅಂಗರಚನೆಯನ್ನು ರೂಪಿಸಿ, ಆಸಕ್ತರಿಗೆ ತಿಳಿಸುವ ಕೆಲಸವನ್ನು ಮೂಡಿತು. ಗಮಕ ಕಲೆಯ ಅಭಿಮಾನಿಗಳಿಂದ ಪ್ರೋತ್ಸಾಹದಾಯಕವಾದ ಉತ್ತಮ ಪ್ರತಿಕ್ರಿಯೆಗಳು ಬಂದುವು.

ಈ ಹಿನ್ನೆಲೆಯಲ್ಲಿ “ಕರ್ನಾಟಕ ಗಮಕ ಕಲಾ ಪರಿಷತ್ತು” ಎಂಬ ಸಂಸ್ಥೆಯನ್ನು ೧೯೮೨ ಅಕ್ಟೋಬರ್ ೨ನೇ ತಾರೀಖು ‘ಗಾಂಧೀ ಜಯಂತಿ’ಯಂದು ಸನ್ಮಾನ್ಯ ಶ್ರೀ. ಜಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಅಧಿಕೃತವಾಗಿ ಸ್ಥಾಪಿಸಲಾಯಿತು. ಅದೇ ವರ್ಷವೇ (೨೫.೧೦.೧೯೮೨) ವಿದ್ಯುಕ್ತವಾಗಿ ಸಂಸ್ಥೆಯೊಂದನ್ನು ನೋಂದಾಯಿಸಲಾಯಿತು.

All rights reserved. © Karnataka Gamaka Kala Parishath 2020