ಕರ್ನಾಟಕ ಗಮಕ ಕಲಾ ಪರಿಷತ್ತಿನ ಮುಖ್ಯ ಧ್ಯೇಯೋದ್ದೇಶಗಳು ಈ ಕೆಳಗಿನಂತಿವೆ:೧. ಪ್ರಜಾಸಮೂಹದಲ್ಲಿ ಪ್ರಾಚೀನವಾದ ಗಮಕ ಕಲೆಯ ಬಗೆಗೆ ಆದರಾಭಿಮಾನ, ಆಸಕ್ತಿಗಳನ್ನು ಮೂಡಿಸಿ ಬೆಳೆಸುವುದು.
೨. ಎಲ್ಲ ಕಾಲಘಟ್ಟದ, ಎಲ್ಲ ಪ್ರಕಾರದ ಕನ್ನಡ ಕಾವ್ಯಗಳ ವಾಚನ-ವ್ಯಾಖ್ಯಾನಗಳನ್ನು ವ್ಯಾಪಕವಾಗಿ ವ್ಯವಸ್ಥೆ ಮಾಡುವುದು.
೩. ಗಮಕ ಕಲಾವಿದರ ಸಮ್ಮೇಳನ, ವಿಚಾರಗೋಷ್ಠಿ, ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸುವುದು.
೪. ರಾಜ್ಯಾದ್ಯಂತ ವಿವಿಧ ಗಮಕ ಶೈಕ್ಷಣಿಕ ತರಗತಿಗಳನ್ನು ತೆರೆದು ಪಾಠ, ಪ್ರವಚನಗಳನ್ನು ನಡೆಸುವುದು. ಪರೀಕ್ಷೆಗಳನ್ನು ನಡೆಸಿ ಅರ್ಹತಾ ಪತ್ರಗಳನ್ನು ನೀಡುವುದು.
೫. ಕಾವ್ಯವಾಚನದ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು ಶಿಕ್ಷಣ-ತರಬೇತಿ ಶಿಬಿರಗಳನ್ನು ನಡೆಸುವುದು.
೬. ಗಮಕ ಕಲೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವುದು.
೭. ಗಮಕ ಸಂಬಂಧೀ ಶಾಸ್ತ್ರಗ್ರಂಥಗಳು, ಪಠ್ಯಪುಸ್ತಕಗಳು, ಕಾವ್ಯಗಳು, ಅನ್ಯಾನ್ಯ ಗಮಕಸಾಹಿತ್ಯಗಳನ್ನು ಪ್ರಕಟಿಸುವುದು.
೮. ಗಮಕಕಲೆಯ ಪುನರುಜ್ಜೀವನ-ಪ್ರಸರಣದಂತಹ ಮಹತ್ತರ ಸೇವೆಯಲ್ಲಿ ತೊಡಗಿರುವ ಗಮಕಿಗಳನ್ನು ಗುರುತಿಸಿ ಗೌರವಿಸುವುದು.
೯. ಪ್ರಾಚೀನ ಕವಿಗಳ ಜಯಂತ್ಯುತ್ಸವಗಳನ್ನು ಆಚರಿಸಿ, ಆ ಮೂಲಕ ಅವರ ಕಾವ್ಯಗಳನ್ನು ಜನರಿಗೆ ಪರಿಚಯಿಸುವುದು.
೧೦. ರಾಜ್ಯಾದ್ಯಂತ ಗಮಕ ಕಲೆಯ ಪ್ರಚಾರಕ್ಕಾಗಿ ಗಮಕಿಗಳ ಮತ್ತು ವಿದ್ವಾಂಸರ ಪ್ರವಾಸಗಳನ್ನು ಏರ್ಪಡಿಸುವುದು.
೧೧. ಪ್ರಸಿದ್ಧ ಗಮಕಿಗಳ ಕಾವ್ಯವಾಚನಗಳನ್ನು ಧ್ವನಿ ಮುದ್ರಿಸಿ, ಗಮಕ ಕಲಾಸಕ್ತರಿಗೆ ಒದಗಿಸುವುದು.
೧೨. ಆಧುನಿಕ ಕಾವ್ಯಗಳಿಗೆ ಗಮಕ ಕಲೆಯನ್ನು ಅನ್ವಯಿಸಲು ಪ್ರಯೋಗ ಮಾರ್ಗಗಳನ್ನು ಕೈಗೊಳ್ಳುವುದು.
೧೩. ಗಮಕ ಕಲೆಯ ಉಳಿವು-ಬೆಳವಿಗೆ ಅಗತ್ಯವಾದ ಅನ್ಯಾನ್ಯ ಕಾರ್ಯಕ್ರಮಗಳನ್ನು ನಡೆಸುವುದು.
ಪರಿಷತ್ತಿನ ಸ್ಥಾಪನೆ, ಮುನ್ನಡೆ: ಕರ್ನಾಟಕ ಗಮಕ ಕಲಾ ಪರಿಷತ್ತು ಸ್ಥಾಪನೆಯಾದದ್ದು ೨೫ - ೧೦ - ೧೯೮೨ರಲ್ಲಿ. ಆಗ ಪರಿಷತ್ತಿನ ಪ್ರಥಮಾಧ್ಯಕ್ಷರಾಗಿ ಹೊಣೆ ಹೊತ್ತದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ಗಮಕ ಕಲಾಭಿಮಾನಿಗಳೂ, ಸಹೃದಯರೂ ಆಗಿದ್ದ ಸನ್ಮಾನ್ಯ ಶ್ರೀ ಜಿ. ನಾರಾಯಣ ಅವರು. ಅವರೊಂದಿಗೆ ಉಪಾಧ್ಯಕ್ಷರಾಗಿದ್ದವರು ನಾಡಿನ ಪ್ರಖ್ಯಾತ ಗಮಕಿಗಳೂ, ಹಿರಿಯರೂ ಆಗಿದ್ದ ಎಂ. ರಾಘವೇಂದ್ರರಾಯರು. ಈ ಇಬ್ಬರ ನೇತೃತ್ವ, ಪರಿಶ್ರಮದಲ್ಲಿ ಪರಿಷತ್ತು ಮುನ್ನಡೆಯಿತು. ಆಗ ಪರಿಷತ್ತಿಗೆ ಒಂದು ಅರ್ಥಪೂರ್ಣ ಲಾಂಛನವನ್ನು ವಿನ್ಯಾಸ ಮಾಡಿ ಒದಗಿಸಿದ ಕೀರ್ತಿ ಮಾಲೂರಿನ ಗಮಕಿ ದಿ. ವೆಂಕಟಪ್ಪನವರದು. ಪರಿಷತ್ತು ಹುಟ್ಟಿದ ಮೊದಲ ವರ್ಷದ ತರುವಾಯ, ೨೪-೨೫ ಡಿಸೆಂಬರ್ ೧೯೮೩ ಅವಧಿಯಲ್ಲಿ ಅಖಿಲ ಕರ್ನಾಟಕ ಪ್ರಥಮ ಗಮಕ ಕಲಾ ಸಮ್ಮೇಳನವು ಬೆಂಗಳೂರಿನಲ್ಲಿ ನಡೆಯಿತು. ಈ ಎರಡು ದಿನಗಳ ಅವಧಿಯ ಪ್ರಥಮ ಸಮ್ಮೇಳನದ ಅಧ್ಯಕ್ಷಪದವನ್ನು ಗಮಕ ವಿದ್ವಾನ್ ಮೈ.ಶೇ. ಅನಂತಪದ್ಮನಾಭರಾಯರು ವಹಿಸಿದ್ದರು. ಪರಿಷತ್ತಿನ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಲು ಅನುವಾಗುವಂತೆ
(೧) ಶಿಕ್ಷಣ ಮತ್ತು ಪರೀಕ್ಷಾ ಸಮಿತಿ
(೨) ಗಮಕ ಪ್ರಚಾರ ಸಮಿತಿ
(೩) ಸಂಶೋಧನಾ ಸಮಿತಿ
(೪) ಧ್ವನಿಮುದ್ರಣ ಸಮಿತಿ
ಹೀಗೆ ನಾಲ್ಕು ಉಪಸಮಿತಿಗಳು ಸಂರಚಿತಗೊಂಡವು. ಗಮಕ ಕಲೆಯ ಕೆಲಸಗಳು ವ್ಯವಸ್ಥಿತವಾಗಿ ನಡೆಯಲು ಪ್ರಾರಂಭವಾಯಿತು. ನಂತರದಲ್ಲಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರತಿ ಜಿಲ್ಲೆಗೊಬ್ಬರಂತೆ ಜಿಲ್ಲಾ ಪ್ರತಿನಿಧಿಗಳನ್ನು ನೇಮಿಸಿ, ಅವರಿಗೆ ಪರಿಷತ್ತಿನಲ್ಲಿ ಪ್ರಾತಿನಿಧ್ಯವನ್ನು ಕೊಟ್ಟು, ಕರ್ನಾಟಕ ಗಮಕ ಕಲಾ ಪರಿಷತ್ತನ್ನು ಸಂಪೂರ್ಣವಾಗಿ ಒಂದು ‘ರಾಜ್ಯಮಟ್ಟದ ಸಂಸ್ಥೆ’ಯನ್ನಾಗಿ ಮಾಡಲಾಯಿತು. ದ್ವಿತೀಯ ರಾಜ್ಯಮಟ್ಟದ ಸಮ್ಮೇಳನವು ೧೯೮೮ ಜೂನ್ ೩, ೪ ಮತ್ತು ೫ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಗಮಕ ವಿದ್ವಾನ್ ಶ್ರೀ ಬಿ.ಎಸ್.ಎಸ್. ಕೌಶಿಕರ ಘನ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿಯೇ ಗಮಕ ಘನ ಕವಿ ಶ್ರೀ ಬಿ.ಎಸ್.ಎಸ್. ಕೌಶಿಕರಿಗೆ ‘ಗಮಕ ರತ್ನಾಕರ’ ಎಂಬ ಅಭಿಧಾನವನ್ನು ನೀಡಿ ಗೌರವಿಸಲಾಯಿತು. ನಾಲ್ಕು ವರ್ಷಗಳ ನಂತರ, ೧೯೯೨ರ ಅಕ್ಟೋಬರ್ ೯-೧೧ ಈ ದಿನಗಳಲ್ಲಿ ಬೆಂಗಳೂರಿನ ಶೃಂಗೇರಿ ಮಠದ ಆವರಣದಲ್ಲಿ ನಡೆದ ತೃತೀಯ ಸಮ್ಮೇಳನದ ಅಧ್ಯಕ್ಷತೆಯು ಗಮಕ ವಿದ್ವಾನ್ ಶ್ರೀ ಎಂ. ರಾಘವೇಂದ್ರರಾಯರ ಹೆಗಲೇರಿತು. ಇದೇ ಸಂದರ್ಭದಲ್ಲಿ ಅವರಿಗೆ ‘ಗಮಕ ರತ್ನಾಕರ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಈ ನಡುವೆ, ದಿನಾಂಕ ೦೧.೧೨.೧೯೯೦ರಿಂದ ಪರಿಷತ್ತಿನ ಕಾರ್ಯಾಲಯವನ್ನು ತ್ಯಾಗರಾಜನಗರದಿಂದ ಚಾಮರಾಜಪೇಟೆಯ ಡಾ|| ವಿ. ಸೀತಾರಾಮಯ್ಯ ರಸ್ತೆಗೆ ಬದಲಾಯಿಸಲಾಯಿತು. ಇದೇ ವರ್ಷದಲ್ಲಿ, ಕನಕದಾಸರ ೫೦೦ನೇ ಜಯಂತ್ಯುತ್ಸವವನ್ನು ಹಮ್ಮಿಕೊಂಡ ಪರಿಷತ್ತು, ಕನಕಸಾಹಿತ್ಯದ ವಾಚನ-ವ್ಯಾಖ್ಯಾನ, ಕೀರ್ತನೆಗಳನ್ನು ಪಸರಿಸುವ ಮೂಲಕ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನಡೆಸಿತು. ಕಾಲಕ್ರಮದಲ್ಲಿ ಅನೇಕ ಸಹೃದಯಿಗಳ ಕೊಡುಗೆಗಳಿಂದ ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ‘ದತ್ತಿನಿಧಿ’ಗಳ ಸ್ಥಾಪನೆಯಾದುವು. ದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸುವ ವ್ಯವಸ್ಥೆ ಆರಂಭವಾಗಿ ವರ್ಷ ೨೦೧೦ರ ವೇಳೆಗೆ ದತ್ತಿನಿಧಿಯು ಎರಡು ಲಕ್ಷ ರೂಪಾಯಿಗಳ ಮೊತ್ತವನ್ನು ಮುಟ್ಟಿತು. ಮುಂದೆ ೧೯೯೪-೯೫ರಲ್ಲಿ ಪರಿಷತ್ತು ರನ್ನ ಮಹಾಕವಿಯ ಕೃತಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆಯ ಗ್ರಂಥದಾನದ ಸಹಸ್ರಾಬ್ದ ಉತ್ಸವವನ್ನು ರಾಜ್ಯಾದ್ಯಂತ ನೂರಕ್ಕೂ ಹೆಚ್ಚಿನ ಕಾವ್ಯವಾಚನ-ವ್ಯಾಖ್ಯಾನಗಳ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಆಚರಿಸಿತು. ೧೯೯೪ರಲ್ಲಿ ಪರಿಷತ್ತಿನ ಸದಸ್ಯರಾದ ಗಮಕ ವಿದುಷಿ ಶ್ರೀಮತಿ ಇಂದಿರಾ ವೆಂಕಟೇಶ್ ಮತ್ತು ಶ್ರೀ. ಐ.ಎಸ್. ವೆಂಕಟೇಶ ಅವರು ಕೆಲವು ಗಮಕ ಕಾರ್ಯಕ್ರಮಗಳನ್ನು ಅಬುಧಾಬಿಯಲ್ಲಿ ನಡೆಸಿ ವಿದೇಶದಲ್ಲೂ ಗಮಕ ದುಂದುಭಿ ಮೊಳಗಿಸಿದರು. ೨೩.೦೧.೧೯೯೪ರಂದು ಪರಿಷತ್ತಿನ ಕಾರ್ಯಾಲಯದಲ್ಲಿ "ಆದ್ಯ ಗಮಕತ್ರಯರು" ಎನಿಸಿಕೊಂಡ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು, ದಿ|| ಸಂ.ಗೋ. ಬಿಂದೂರಾಯರು ಮತ್ತು ದಿ|| ಕೃಷ್ಣಗಿರಿ ಕೃಷ್ಣರಾಯರ ಭಾವಚಿತ್ರಗಳ ಅನಾವರಣ, ಸಂಸ್ಮರಣೆ ಇತ್ಯಾದಿ ಕಾರ್ಯಕ್ರಮಗಳು ನಡೆದುವು. ೧೯೯೩-೯೪ರಲ್ಲಿ ತಮ್ಮ ದೇಹಸ್ಥಿತಿಯಿಂದಾಗಿ ಗಮಕ ರತ್ನಾಕರ ಶ್ರೀ ರಾಘವೇಂದ್ರರಾಯರು ತ್ಯಜಿಸಿದ ಪರಿಷತ್ತಿನ ಉಪಾಧ್ಯಕ್ಷ ಸ್ಥಾನವನ್ನು ಗಾಂಧೀವಾದಿ ಮತ್ತು ಗಮಕಿ ಶ್ರೀ ನೀಲತ್ತಹಳ್ಳಿ ಕಸ್ತೂರಿಯವರು ವಹಿಸಿಕೊಂಡರು. ೧೯೯೫ರಲ್ಲಿ ಪರಿಷತ್ತಿನ ಕಾರ್ಯಾಲಯವು ಬಸವನಗುಡಿ ನರಸಿಂಹರಾಜಾ ಕಾಲೋನಿಯಲ್ಲಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣಕ್ಕೆ ಸ್ಥಳಾಂತರಗೊಂಡಿತು. ೧೯೯೭ ಜನವರಿ ೧೭-೧೯ರಂದು ಮೂರು ದಿನಗಳ ಅಖಿಲ ಕರ್ನಾಟಕ ನಾಲ್ಕನೆಯ ಗಮಕ ಕಲಾ ಸಮ್ಮೇಳನವು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಹಿರಿಯ ವಿದ್ವಾಂಸರೂ, ವ್ಯಾಖ್ಯಾನಕಾರರೂ ಆಗಿದ್ದ ಮತ್ತೂರಿನ ಕೀರ್ತಿಶೇಷ ಕೆ.ಎಸ್. ಮಾರ್ಕಂಡೇಯ ಅವಧಾನಿಗಳು ಸಮ್ಮೇಳನಾಧ್ಯಕ್ಷರಾಗಿದ್ದರು. ೧೯೯೭, ಭಾರತ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ. ಈ ಸಂಭ್ರಮವನ್ನು ಪರಿಷತ್ತು ‘ಗಮಕ ಕಾವೇರಿ’ ಎಂಬ ಯೋಜನೆಯಡಿಯಲ್ಲಿ ಆಗಸ್ಟ ೧೯೯೭ರಿಂದ ಸೆಪ್ಟೆಂಬರ್ ೧೯೯೮ರವರೆಗಿನ ಒಂದು ವರ್ಷ ಕಾಲ, ರಾಜ್ಯಾದ್ಯಂತ ಸುಮಾರು ೧೨೭೫ ಕಾವ್ಯವಾಚನ, ದೇವರನಾಮ / ವಚನ / ದೇಶಭಕ್ತಿ ಗೀತಗಾಯನ ಕಾರ್ಯಕ್ರಮಗಳನ್ನು ನಡೆಸಿ ಸ್ವರ್ಣಮಹೋತ್ಸವವನ್ನು ಅದ್ದೂರಿಯಾಗಿ ನಡೆಸಿತು. ಪರಿಷತ್ತಿನ ಆರನೆಯ ಅಖಿಲ ಕರ್ನಾಟಕ ವಾರ್ಷಿಕ ಸಮ್ಮೇಳನವು ೨೦೦೧ ನವಂಬರ್ ೧೦ ಮತ್ತು ೧೧ರಂದು ಚಿಕ್ಕಮಗಳೂರಿನಲ್ಲಿ ಜರುಗಿತು. ಗಮಕ ವಿದುಷಿ ವಿ. ಶ್ರೀಮತಿ ಪ್ರಿಯದರ್ಶಿನಿ ಅಯ್ಯಂಗಾರ್ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ೨೦೦೨ ಅಕ್ಟೋಬರ್ ೨೦ರಂದು ನಡೆದ ಪರಿಷತ್ತಿನ ವಾರ್ಷಿಕ ಸರ್ವಸದಸ್ಯ ಸಭೆಯಲ್ಲಿ ಸ್ಥಾಪಕಾಧ್ಯಕ್ಷರಾದ ಶ್ರೀ ಜಿ. ನಾರಾಯಣ ಅವರು ತಮ್ಮ ಅನಾರೋಗ್ಯ ಮತ್ತಿತರ ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷ ಸ್ಥಾನವನ್ನು ತೆರವು ಮಾಡಿದರು. ನಂತರದಲ್ಲಿ ಈ ತೆರವಾದ ಸ್ಥಾನವನ್ನು ಹಿರಿಯ ವಿದ್ವಾಂಸರಾಗಿದ್ದ, ಗಮಕ ವಿದ್ವಾನ್ (ದಿ) ಕಂ. ಸು. ವೆಂಕಟಾದ್ರಿ ಶರ್ಮ ಅವರು ವಹಿಸಿಕೊಂಡರು. ದಿ. ಜಿ. ನಾರಾಯಣ ಅವರು ಸುಮಾರು ೨೦ ವರ್ಷಗಳ ಕಾಲ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪನೆ, ಗಮಕ ಕಲೆಯ ಬೆಳವಣಿಗೆ, ಪ್ರಚಾರ, ಹಿರಿಯ ಗಮಕಿಗಳ ಸನ್ಮಾನ, ಹಲವಾರು ಹೊಸ ಯೋಜನೆಗಳು ಇತ್ಯಾದಿಗಳಿಂದ ಪರಿಷತ್ತನ್ನು ರಾಜ್ಯದ ಒಂದು ಉತ್ತಮ ಸಂಸ್ಥೆಯಾಗಿ ರೂಪಿಸಿ ಗಮಕ ಕಲಾ ಪರಿಷತ್ತಿನ ಇತಿಹಾಸದಲ್ಲಿ ತಮ್ಮದೇ ಆದ ಪುಟಗಳನ್ನು ದಾಖಲಿಸಿದರು. ೨೦೦೫ ಫೆಬ್ರವರಿ ೨೫ರಂದು ನಡೆದ ವಾರ್ಷಿಕ ಸರ್ವಸದಸ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಡಾ ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರು. ಇತಿಹಾಸಜ್ಞರೂ, ಲೇಖಕರೂ, ಸಂಶೋಧಕರೂ ಆದ ಶ್ರೀಯುತರು ಉತ್ತಮ ವ್ಯಾಖ್ಯಾನಕಾರರೂ ಹೌದು. ೨೦೦೭ - ಪರಿಷತ್ತಿನ ಬೆಳ್ಳಿಹಬ್ಬದ ವರ್ಷ ಅದಕ್ಕಾಗಿ ‘ಗಮಕ ಸಂಭ್ರಮ’ ಯೋಜನೆಯಡಿಯಲ್ಲಿ ಈಗಾಗಲೇ ‘ಕರ್ನಾಟಕ ಏಕೀಕರಣ ಗೀತೆಗಳು’ ಎಂಬ ನಾಡಗೀತೆಗಳ ಸಂಗ್ರಹ, ‘ಕುಮಾರವ್ಯಾಸ ವಚನಾಮೃತ’ ಎಂಬ ಉಪಯುಕ್ತ ಪುಸ್ತಕಗಳನ್ನು ಪರಿಷತ್ತು ಮುದ್ರಿಸಿ ಲೋಕಾರ್ಪಣೆ ಮಾಡಿದ್ದಲ್ಲದೆ, ಹಿರಿಯ ಗಮಕಿಗಳ ಸಾಧನೆ ಪರಿಚಯದ ಹೊತ್ತಗೆಗಳನ್ನು ಪ್ರಕಟಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕ ಗಡಿಪ್ರದೇಶಗಳಲ್ಲೂ ಗಮಕ ತರಗತಿಗಳು ಪ್ರಾರಂಭವಾಗಿವೆ. ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಪರಿಷತ್ತಿನ ಜಿಲ್ಲಾ ಘಟಕ ಪ್ರಾರಂಭವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದಸ್ಯತ್ವ ನೋಂದಣಿಯ ಅಭಿಯಾನವು ನಡೆಯುತ್ತಿದೆ. ಏಳನೆಯ ರಾಜ್ಯಮಟ್ಟದ ಗಮಕ ಕಲಾ ಸಮ್ಮೇಳನವು ಡಿಸೆಂಬರ್ ೨೦೦೭ರಲ್ಲಿ ಬಾಗಲಕೋಟೆಯಲ್ಲಿ ಗಮಕ ಗಂಧರ್ವ ಶ್ರೀ ಹೊಸಹಳ್ಳಿ ಕೇಶವಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಂಟನೆಯ ರಾಜ್ಯ ಸಮ್ಮೇಳನವು ಸೆಪ್ಟೆಂಬರ್ ೨೦೦೮ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಗಮಕಿ ಶ್ರೀ. ಬಿ.ಚಂದ್ರಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗಮಕ ಕಲೆಗೆ ಹೊಸ ಆಯಾಮವನ್ನು ತಂದುಕೊಡುವ ದೃಷ್ಟಿಯಿಂದ ಗಮಕ ರೂಪಕ, ಗಮಕ ನೃತ್ಯರೂಪಕ, ಗಮಕ ಕಾವ್ಯಚಿತ್ರ ವಿಶೇಷ ಹಿಮ್ಮೇಳಗಳೊಂದಿಗೆ ಗಮಕ ವಾಚನ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹೊಸ ಹೊಸ ಕಾವ್ಯಗಳನ್ನೂ ವಾಚನ ವ್ಯಾಖ್ಯಾನಗಳಿಗೆ ಆಯ್ದುಕೊಂಡು ಹತ್ತು ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಯಿತು. ನಂತರ ೨೦೦೮ರ ಅಕ್ಟೋಬರ್ ೧೯ರಿಂದ ಗಮಕಿ, ಸಾಹಿತಿ ಶ್ರೀ ಬೆ.ಗೋ. ರಮೇಶ್‌ರವರು ಪರಿಷತ್ತಿನ ಅಧ್ಯಕ್ಷತೆಯ ಹೊಣೆಯನ್ನು ವಹಿಸಿಕೊಂಡರು. ನಂತರದಲ್ಲಿ ೨೦೧೧-೨೦೧೪ ಮತ್ತು ೨೦೧೪-೧೭ ಹೀಗೆ ಎರಡು ಅವಧಿಗಳಿಗೆ ಆಕಾಶವಾಣಿಯ ನಿವೃತ್ತ ಅಧಿಕಾರಿಗಳಾದ, ಗಮಕ ವಿದ್ವಾನ್ ಕೀರ್ತಿಶೇಷ ಎಂ. ರಾಘವೇಂದ್ರರಾಯರ ಸುಪುತ್ರರಾದ ಗಮಕ ವಿದ್ವಾನ್ ಎಂ. ಆರ್. ಸತ್ಯನಾರಾಯಣರು ಅಧ್ಯಕ್ಷರಾಗಿ ಪರಿಷತ್ತನ್ನು ಮುನ್ನಡೆಸಿದರು. ಮುಂದೆ ೨೦೧೭ ಸರ್ವಸದಸ್ಯ ಸಭೆಯಲ್ಲಿ ಹೆಸರಾಂತ ಗಮಕ ವಿದುಷಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರು ೨೦೦೧೭-೨೦ರ ಪ್ರಸಕ್ತ ಸಾಲಿಗೆ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರು. ಗಮಕ ಕಲೆಯನ್ನೇ ಹೃತ್ಕವಾಟವಾಗಿಸಿಕೊಂಡಿರುವ ಮಾತೆ ಗಂಗಮ್ಮನವರು ಪರಿಷತ್ತಿನ ಕೇಂದ್ರವಾದ ಬೆಂಗಳೂರಿನಲ್ಲಿಯೂ ಕರ್ನಾಟಕದ ಹತ್ತು ಹಲವು ಭಾಗಗಳಲ್ಲಿಯೂ ಕಾರ್ಯಕ್ರಮಗಳನ್ನು ನಿಯೋಜಿಸುವುದು, ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಂಪರ್ಕಿಸಿ ಅವರನ್ನು ಗಮಕಸೇವೆಗೆ ಪ್ರೋತ್ಸಾಹಿಸುವುದು, ಶಾಲಾವಿದ್ಯಾರ್ಥಿಗಳಿಗೆ ಗಮಕವನ್ನು ಪರಿಚಯಿಸುವುದು, ಹತ್ತು ಹಲವು ಗಮಕ ಕಾರ್ಯಕ್ರಮಗಳನ್ನು ನಡೆಸುವುದು, ಜೊತೆಯ ಹಿರಿಯ-ಕಿರಿಯ ಗಮಕಿಗಳಿಗೆ ವೇದಿಕೆಯ ಅವಕಾಶಗಳನ್ನು ಒದಗಿಸಿ ಹುರಿದುಂಬಿಸುವುದು - ಹೀಗೆ ಅಹರ್ನಿಶಿ ಗಮಕಸೇವೆಯಲ್ಲಿಯೇ ಮಗ್ನರಾಗಿ ಗಮಕವನ್ನೇ ಉಸಿರಾಗಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಅವರು ಸಾಧಿಸಿದ ಮಹತ್ತರ ಸಾಹಸದ ಕೆಲಸವೆಂದರೆ ಪರಿಷತ್ತಿಗೆ ಸ್ವಂತ ಕಟ್ಟಡವೊಂದನ್ನು ಮಾಡಿದುದು. ಇದರಲ್ಲಿ ನೂರಾರು ಸಹೃದಯರ ದೇಣಿಗೆಯೂ, ಅಧ್ಯಕ್ಷರ ಅವಿರತವಾದ ಪರಿಶ್ರಮವೂ, ತನು-ಮನ-ಧನಗಳ ಪಾತ್ರವೂ ಘನವಾಗಿ ಒದಗಿದುದು ಪರಿಷತ್ತಿನ ಪುಣ್ಯಭಾಗ. ಪರಿಷತ್ತಿನ ಧ್ಯೇಯ ಧೋರಣೆಗಳನ್ನು ಅಚಲವಾದ ಲಕ್ಷ್ಯದಲ್ಲಿರಿಸಿಕೊಂಡು ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ಗಮಕ ಕಲಾ ಸಮ್ಮೇಳನಗಳು ನಡೆದು ಗಮಕ ಕಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಯಶಸ್ಸನ್ನು ಪಡೆದಿವೆ. ಈಗ ಪರಿಷತ್ತು ವಾಟ್ಸಪ್ ವೇದಿಕೆಯನ್ನು ಉಪಯೋಗಿಸಿಕೊಂಡು ನೂರಾರು ಸದಸ್ಯರ ನಡುವೆ ಸಂವಹನ, ನಿತ್ಯ ಗಮಕ ಕಾರ್ಯಕ್ರಮ, ಒಂದು ಮಟ್ಟಿನ ಪಾಠ-ಪ್ರವಚನ, ಉಪಯೋಗೀ ವಿಷಯಗಳ ಬಗ್ಗೆ ಚರ್ಚೆ - ಹೀಗೆ ಗಣನೀಯವಾಗಿ ಬೌದ್ಧಿಕ ಪ್ರಚೋದನೆಯ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆಯುತ್ತಿವೆ. ಈ ಎಲ್ಲವೂ ಪರಿಷತ್ತಿನ ಅಧ್ಯಕ್ಷರು ನಿತ್ಯ ಮತ್ತು ನೇರ ಭಾಗಿಯಾಗಿ ಮುನ್ನಡೆಸುತ್ತಿದ್ದಾರೆ. ಈಗಿನ ಕೋವಿಡ್ ಪೀಡೆಯ ಸಮಯದಲ್ಲಿ ಈ ವೇದಿಕೆಯಿಂದಾಗಿ ಸದಸ್ಯರು ಸಂಪರ್ಕದಲ್ಲಿದ್ದು, ಗಮಕವನ್ನು ನಿತ್ಯ ಅಭ್ಯಾಸ, ಕೇಳ್ಮೆ, ಚಿಂತನೆ ಇವುಗಳಲ್ಲಿ ತೊಡಗಿಸುತ್ತಿರುವುದು ಬಹು ಹೃದ್ಯವಾದ ಕೆಲಸವಾಗಿದೆ.

All rights reserved. © Karnataka Gamaka Kala Parishath 2020